ಪಾಠದ ಟಿಪ್ಪಣಿ -
ಯಾವುದಾದರೂ ನಿರ್ದಿಷ್ಟ ಪಠ್ಯವಿಷಯದಲ್ಲಿ ಒಂದು ಕಾಲಾವಧಿಯಲ್ಲಿ (ಪೀರಿಯೆಡ್) ಕಲಿಸಬಹುದಾದ ಪಾಠವೊಂದನ್ನು ಬೋಧಿಸಲು ತಮ್ಮ ಉಪಯೋಗಕ್ಕಾಗಿ ಅಧ್ಯಾಪಕರು ಪೂರ್ವಭಾವಿಯಾಗಿ ಲಿಖಿತರೂಪದಲ್ಲಿ ಸಿದ್ಧಪಡಿಸಿಕೊಂಡಿರುವ ಅಂಶಗಳು. ಇದು ಉದ್ದೇಶಿತ ಗುರಿಯನ್ನು ಸಾಧಿಸಲು ಅಧ್ಯಾಪಕರಿಗೆ ಮಾರ್ಗದರ್ಶನ ನೀಡುವುದಲ್ಲದೆ ಅಡ್ಡದಾರಿ ಹಿಡಿಯುವುದನ್ನೂ ಮುಖ್ಯಾಂಶಗಳನ್ನು ಕೈಬಿಡುವುದನ್ನು ತಪ್ಪಿಸುತ್ತದೆ. ಜೊತೆಗೆ ಆಗ ಬಳಸಬೇಕಾದ ಉಪಕರಣಾದಿ ಪಾಠೋಪಕರಣಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲೂ ನೆರವಾಗುತ್ತದೆ. ಹಾಗೂ ನೂತನವಾಗಿ ಬೋಧನಾ ವೃತ್ತಿಗೆ ಬಂದಿರತಕ್ಕವರಿಗೆ ತಮ್ಮ ಕಾರ್ಯದಲ್ಲಿ ನಂಬಿಕೆಯನ್ನೂ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. 

ಉಪಾಧ್ಯಾಯರು ಸಿದ್ಧಪಡಿಸುವ ಪಾಠದ ಟಿಪ್ಪಣೆಯಲ್ಲಿ ಕೆಲವು ಗುಣಲಕ್ಷಣಗಳು ಇರಬೇಕಾಗುತ್ತದೆ. ಪಾಠ ಟಿಪ್ಪಣೆಯಲ್ಲಿ ಹಿಂದೆಯೇ ಹರ್ಬರ್ಟ್ ಸೂಚಿಸಿದಂತೆ ಸಿದ್ಧತೆ, ಪ್ರತಿಪಾದನೆ, ಹೋಲಿಕೆ, ಸಾಮಾನ್ಯೀಕರಣ, ಅನ್ವಯ ಎಂಬ 5 ಹಂತಗಳಿವೆ. ಟಿಪ್ಪಣೆಯ ಮೇಲ್ಭಾಗದಲ್ಲಿ ಪಾಠದ ವಿಷಯ, ಕಾಲಾವಧಿ, ಸಾಧಿಸಬೇಕಾದ ತಾತ್ಕಾಲಿಕ ಹಾಗೂ ಅಂತಿಮ ಉದ್ದೇಶ-ಇವನ್ನು ಸೂಚಿಸಲಾಗುವುದು. ಮೊದಲನೆಯ ಹಂತದಲ್ಲಿ ವಿದ್ಯಾರ್ಥಿಗಳ ಪೂರ್ಣ ಜ್ಞಾನವನ್ನು ಸ್ಮರಣೆಗೆ ತರತಕ್ಕ ಪೀಠಿಕೆಯು ಅದರ ಕೊನೆಯಲ್ಲಿ ವಿದ್ಯಾರ್ಥಿಗಳ ಉದ್ದೇಶವನ್ನು ವಿಷಯದ ಕಡೆ ಕೇಂದ್ರೀಕರಿಸುವಂತೆ ಮಾಡುವ ಸಮಸ್ಯಾರೂಪದ ಪ್ರಶ್ನೆಯೊಂದು ಇರುತ್ತದೆ. ಅನಂತರ ಟಿಪ್ಪಣೆಗಳನ್ನು ವಿಷಯ, ವಿಶ್ಲೇಷಣೆ, ವಿಷಯ ಪ್ರದರ್ಶನ, ಬೋಧನಾ ವಿಧಾನ, ಪ್ರದರ್ಶಿಸಬೇಕಾದ ಚಿತ್ರ ಉಪಕರಣ ಮುಂತಾದವುಗಳ ಉಲ್ಲೇಖ ಎಂಬ 4 ಸ್ಥರಗಳಲ್ಲಿ ಬರೆಯಲಾಗುವುದು. ವಿಶ್ಲೇಷಣೆಯ ಸ್ಥರದಲ್ಲಿ ಪಾಠ ವಿಷಯವನ್ನು ಎರಡು ಅಥವಾ 3 ಆಲೋಚನಾ ವಿಭಾಗಗಳಾಗಿ ವಿಂಗಡಿಸಿಕೊಳ್ಳಲಾಗುವುದು. ಎರಡನೆಯ ಸ್ತರದಲ್ಲಿ ಕಲಿಸಬೇಕಾದ ವಿಷಯದ ವಿವರಣೆಯನ್ನು ಮೂರನೆಯ ಸ್ತರದಲ್ಲಿ ಅದಕ್ಕಾಗಿ ಅನುಸರಿಸಬೇಕಾದ ಕ್ರಮವನ್ನು ಸೂಚಿಸಿರುತ್ತದೆ. ಕೊನೆಯ ಸ್ತರದಲ್ಲಿ ಆಯಾ ಆಲೋಚನಾ ವಿಭಾಗದಲ್ಲಿ ಬಳಸಬೇಕಾದ ಚಿತ್ರ, ತೋರಿಸಬೇಕಾದ ಪ್ರಯೋಗ, ಕಲಿಸಬೇಕಾದ ನೂತನ ಪದಗಳು, ನೆನಪಿಡಬೇಕಾದ ಉಲ್ಲೇಖಗಳು ಮುಂತಾದವನ್ನು ಸೂಚಿಸಲಾಗುವುದು. ಈ ಆಲೋಚನಾ ವಿಭಾಗದ ಕೊನೆಯಲ್ಲಿ ಆಗ ಕಲಿಸಿದ ಅಂಶಗಳನ್ನು ವಿದ್ಯಾರ್ಥಿಗಳಿಂದ ಹೇಳಿಸಲು ತಕ್ಕ ಪ್ರಶ್ನೆಗಳನ್ನು ಆ ಮೂಲಕ ಸಂಗ್ರಹಿಸಬಹುದಾದ ಸಾರಾಂಶವನ್ನು ಬರೆದುಕೊಳ್ಳಲಾಗುವುದು. ಈ ರೀತಿ ಪಾಠದ ಪ್ರತಿ ವಿಭಾಗಕ್ಕೂ ಟಿಪ್ಪಣಿ ಸಿದ್ಧಪಡಿಸಿಕೊಳ್ಳಲಾಗುವುದು. ಕೊನೆಯಲ್ಲಿ ವಿದ್ಯಾರ್ಥಿಗಳು ಮುಂದಿನ ಪಾಠದಲ್ಲಿ ಕಲಿಯಬೇಕಾದ ಅಂಶವನ್ನು ಸೂಚಿಸಲಾಗುವುದು. ಮನೆಯಲ್ಲಿ ಅಭ್ಯಾಸಮಾಡಲು ಅಥವಾ ಇತರ ಚಟುವಟಿಕೆಗಳನ್ನು ಕೈಗೊಳ್ಳಲು ಸಲಹೆಯನ್ನು ನೀಡಲಾಗುವುದು.

ಪಾಠದ ಟಿಪ್ಪಣಿಯನ್ನು ಅಧ್ಯಾಪಕರು ಮೊದಮೊದಲು ಬಹು ವಿವರವಾಗಿ ಸಿದ್ಧ ಪಡಿಸಬೇಕಾಗುತ್ತದೆ. ಅನುಭವ ಹೆಚ್ಚಿದಂತೆ ಸ್ವಲ್ಪ ಸಂಗ್ರಹವಾಗಿ ಬರೆದುಕೊಳ್ಳಬಹುದು. ಟಿಪ್ಪಣಿ ಪೂರ್ವಭಾವಿಯಾಗಿ ಸಿದ್ಧಪಡಿಸಿಕೊಂಡಿದ್ದರೂ ತರಗತಿಯಲ್ಲಿ ಪಾಠ ಮಾಡುವಾಗ ಅಗತ್ಯವಾದ ವ್ಯತ್ಯಾಸ ಮಾಡಿಕೊಳ್ಳಬಹುದು. ಆದರೆ ಅದನ್ನು ತೀರ ಬಿಟ್ಟು ದೂರ ಸರಿಯುವಂತಿಲ್ಲ. ಹಾಗೆ ಜಾಣ್ಮೆಯಿಂದ ಟಿಪ್ಪಣಿಯನ್ನು ಬಳಸಿಕೊಂಡರೆ ಪಾಠ ಯಶಸ್ವಿಯಾಗುವುದು.
(ಬಿ.ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ